ಚಾರ್ನಕೈಟ್ -
ಹೈಪರ್‍ಸ್ತೀನ್ ಎಂಬ ಖನಿಜದಿಂದ ಕೂಡಿರುವ ಶಿಲೆ. ಭಾರತ ಭೂವಿಜ್ಞಾನ ಶಾಖೆಯ ಅಧಿಕಾರಿಯಾಗಿದ್ದ ಥಾಮಸ್ ಹಾಲೆಂಡ್ ಮದರಾಸಿನ ಪಲ್ಲವರಮ್ ಸಮೀಪದ ಗುಡ್ಡಗಳ ಈ ಶಿಲೆಯನ್ನು ವಿವರಿಸಿದ; ಕಲ್ಕತ್ತ ನಗರದ ಸ್ಥಾಪಕ ಜಾಬ್ ಚಾರ್ನಾಕನ ಸಮಾಧಿಗೆ ಇದೇ ಶಿಲೆಯನ್ನು ಉಪಯೋಗಿಸಿದ್ದ ಕಾರಣ ಆತನ ನೆನಪಿಗಾಗಿ ಈ ಶಿಲೆಯನ್ನು ಚಾರ್ನಕೈಟ್ ಎಂದು ಹೆಸರಿಸಿದ (1893). ಇದಕ್ಕೂ ಮುನ್ನ, ಭಾರತ ಭೂವಿಜ್ಞಾನ ಶಾಖೆಯ ಅಧಿಕಾರಿಗಳಾದ ಔಕ್‍ಟರ್ಲೋನಿ (1849), ಎಚ್. ಎಫ್. ಬ್ಲಾನ್‍ಫರ್ಡ್ (1858), ಸಿ.ಎ. ಓಲ್ಡ್ ಹ್ಯಾಮ್ (1864), ಕಿಂಗ್ (1875) ಮತ್ತು ರಾಬರ್ಟ್ ಬ್ರೂಸ್‍ಫುಟ್ (1873) ಮೊದಲಾದವರು ಈ ಶಿಲೆಯನ್ನು ಕುರಿತ ವಿವರಗಳನ್ನು ಹಲವಾರು ಪ್ರದೇಶಗಳಲ್ಲಿ ಸಂಗ್ರಹಿಸಿ ವಿವರಿಸಿದ್ದರು. ಆದರೆ ಈ ಶಿಲೆಗೆ ಚಾರ್ನಕೈಟ್ ಎಂಬ ಅಧಿಕೃತ ನಾಮಕರಣವಾದದ್ದು ಹಾಲೆಂಡ್‍ನಿಂದಲೇ. ಅಲ್ಲದೆ ಈ ವಿಶೇಷ ಶಿಲೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿ ಚಾರ್ನಕೈಟ್ ಶ್ರೇಣಿ ಎಂಬ ಪ್ರತ್ಯೇಕ ಶಿಲಾಶ್ರೇಣಿಯನ್ನೇ ಈತ ಶಿಲಾವಿಜ್ಞಾನಕ್ಕೆ ಕೊಡುಗೆ ನೀಡಿದ್ದಾನೆ. ಇದನ್ನು ಕುರಿತ ವಿಶೇಷ ವರದಿಯೊಂದು 1900ರಲ್ಲಿ ಪ್ರಕಟವೂ ಆಯಿತು. ಅಲ್ಲಿನ ವಿವರಣೆಯ ಪ್ರಕಾರ ಈ ಶ್ರೇಣಿಯಲ್ಲಿ ಹೈಪರ್ ಸ್ತೀನಿನಿಂದ ಕೂಡಿದ ಅಧಿಕ ಸಿಲಿಕಾಂಶ (ಆ್ಯಸಿಡ್), ಮಧ್ಯವರ್ತಿ (ಇಂಟರ್ ಮೀಡಿಯೆಟ್) ಮತ್ತು ಅಲ್ಪಸಿಲಿಕಾಂಶ (ಬೇಸಿಕ್) ಎಂಬ ಮೂರು ವಿಧದ ಶಿಲೆಗಳನ್ನು ಗುರುತಿಸಲಾಗಿದೆ. ಆದರೆ ಇವೆಲ್ಲವುಗಳಲ್ಲೂ ಪರಸ್ಪರ ಜನ್ಯಸಂಬಂಧ ಉಂಟು. ಇದಕ್ಕೆ ಸಾಕ್ಷೀಭೂತವಾದುದೇ ಹೈಪರ್‍ಸ್ತೀನ್. ಅಂದರೆ ಇವೆಲ್ಲವೂ ಒಂದೇ ಮೂಲದಿಂದ ಜನಿಸಿದವೆಂದು ತಿಳಿಯಬೇಕು. ಮಾತೃಶಿಲಾದ್ರವವೊಂದರ ಆರುವಿಕೆಯ ವಿವಿಧ ಹಂತಗಳಲ್ಲಿ ವ್ಯತ್ಯಾಸಾತ್ಮಕ ಕ್ರಿಯೆಯ ಕಾರಣ ಇವು ಉಂಟಾದುವೆಂದು ವಿವರಿಸಲಾಯಿತು. ಈ ಶಿಲಾಬುಡಕಟ್ಟಿನ ಅಧಿಕಸಿಲಿಕಾಂಶ ಶಿಲೆಯನ್ನು ಮಾತ್ರ ಚಾರ್ನಕೈಟ್ ಎಂದು ಕರೆಯಬೇಕೆಂದೂ ಹಾಲೆಂಡ್ ಸ್ಪಷ್ಟಪಡಿಸಿದ. ಆತನೇ ವಿವರಿಸಿರುವಂತೆ ಕ್ವಾಟ್ರ್ಸ್, ಮೈಕ್ರೊಕ್ಲೀನ್ ಫೆಲ್ಡ್‍ಸ್ಪಾರ್, ಹೈಪರ್‍ಸ್ತೀನ್ ಮತ್ತು ಕಬ್ಬಿಣದ ಅದುರು-ಈ ಖನಿಜಗಳಿಂದಾದ ಶಿಲೆಯೇ ಚಾರ್ನಕೈಟ್, ಅಲ್ಲದೆ ಸಾಧ್ಯವಾದಮಟ್ಟಿಗೆ ಚಾರ್ನಕೈಟ್ ಶ್ರೇಣಿಯ ಹೆಸರನ್ನು ದಕ್ಷಿಣಭಾರತಕ್ಕೆ ಮಾತ್ರ ಸೀಮಿತಗೊಳಿಸಬೇಕೆಂಬ ಆಶಯವನ್ನೂ ವ್ಯಕ್ತಪಡಿಸಿದ್ದಾನೆ. ಆದರೆ ಈ ಆಶಯವನ್ನು ಪ್ರಪಂಚದ ಇತರ ಭೂವಿಜ್ಞಾನಿಗಳು ಪಾಲಿಸಲಿಲ್ಲ. ಹೀಗಾಗಿ ಹೈಪರ್ ಸ್ತೀನಿನಿಂದ ಕೂಡಿದ ಈ ಶಿಲೆಯನ್ನು ಪ್ರಪಂಚದ ಹಲವಾರು ಕಡೆ ಬೇರೆ ಬೇರೆ ಭೂವಿಜ್ಞಾನಿಗಳು ಗುರುತಿಸಿ ಚಾರ್ನಕೈಟ್ ಎಂಬ ಹೆಸರಿನಿಂದಲೇ ವಿವರಿಸಿದ್ದಾರೆ. ಆದ್ದರಿಂದ ಈ ಶಿಲೆಯ ಹೆಸರು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿರದೆ ಪ್ರಪಂಚವ್ಯಾಪ್ತಿಯಾಗಿದೆ. ಕೊಂಚಮಟ್ಟಿಗೆ ಭೂವಿಜ್ಞಾನ ಸಾಹಿತ್ಯದಲ್ಲಿ ಇದು ಗೊಂದಲಕ್ಕೆ ಕಾರಣವಾಯಿತೆನ್ನಬಹುದು. ಅಲ್ಲದೆ ಕ್ರಮೇಣ ಅಧಿಕಸಿಲಿಕಾಂಶ ಚಾರ್ನಕೈಟ್, ಮಧ್ಯವರ್ತಿ ಚಾರ್ನಕೈಟ್ ಮತ್ತು ಅಲ್ಪಸಿಲಿಕಾಂಶ ಚಾರ್ನಕೈಟ್ ಎಂಬ ಶಿಲಾ ಹೆಸರುಗಳೂ ಬಳಕೆಗೆ ಬಂದು ಅವುಗಳ ಜನಕ ಹಾಲೆಂಡನ ಆಶಯ ಅಷ್ಟಾಗಿ ಉಳಿಯಲಿಲ್ಲ. 

ಈ ಶ್ರೇಣಿಯ ಶಿಲೆಗಳಿಗೆ ಕೆಲವು ವಿಶಿಷ್ಟ ಲಕ್ಷಣಗಳಿವೆ. ಹೀಗಾಗಿ ಇವುಗಳಿಂದಾದ ಬಂಡೆಗಳನ್ನೂ ಗುಡ್ಡಬೆಟ್ಟಗಳನ್ನೂ ಇತರ ಶಿಲಾಮಾರ್ಗಗಳಿಂದ ಬೇರಾಗಿಸಿ ಗುರುತಿಸಬಹುದು. ಶಿಲೆ ಕಣರಚನೆಯಿಂದ ಕೂಡಿದ್ದು ನೀಲಿಮಿಶ್ರಿತ ಬೂದು ಅಥವಾ ಹಸಿರುಛಾಯೆಯನ್ನು ತಳೆದು ನೋಡಲು ಹೊಚ್ಚ ಹೊಸದಾಗಿರುತ್ತದೆ. ಸಾಮಾನ್ಯವಾಗಿ ಇತರ ಶಿಲೆಗಳನ್ನು ವಾಯುವಿಗೆ ಒಡ್ಡಿದಾಗ ಅವು ತಮ್ಮ ಹೊಳಪನ್ನು ಕಳೆದುಕೊಂಡು ಮಂಕಾಗುವುದುಂಟು. ಆದರೆ ಚಾರ್ನಕೈಟ್ ಹಾಗಲ್ಲ. ಈ ಶಿಲೆಯಲ್ಲಿರುವ ಕ್ವಾಟ್ರ್ಸ್ (ಬೆಣಚು) ಸಾಮಾನ್ಯವಾಗಿ ಬಿಳುಪಾಗಿರುವ ಬದಲು ಒಂದು ಬಗೆಯ ನೀಲಿಬಣ್ಣದ್ದಾಗಿರುತ್ತದೆ. ಫೆಲ್ಡ್‍ಸ್ಪಾರುಗಳೂ ಇದೇ ತೆರನಾದ ನೀಲಿ ಅಥವಾ ನೀಲಿಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತವೆ. ಒಮ್ಮೊಮ್ಮೆ ಇವು ಕಂದುಛಾಯೆಯನ್ನು ತಳೆದಿರುವುದೂ ಉಂಟು. ಹೀಗಾಗಿ ತಿಳಿಯಾದ ಬಣ್ಣದಿಂದಿರಬೇಕಾದ ಚಾರ್ನಕೈಟ್ ನೀಲಿಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತದೆ. ಬಣ್ಣದಲ್ಲಿ ನಿರ್ವರ್ಣ ಖನಿಜಗಳು ಸಹ ವರ್ಣಖನಿಜಗಳನ್ನೇ ಹೋಲುವುದು ಈ ಶಿಲೆಯ ವಿಶಿಷ್ಟಗುಣ. ಹೀಗೆಯೇ ಶಿಲೆಯ ವಿನ್ಯಾಸದಲ್ಲೂ ಒಂದು ಬಗೆಯ ವೈಶಿಷ್ಟ್ಯ ಉಂಟು. ಸಮಕಣ ರಚನೆಯೇ ಈ ಶಿಲೆಗಳ ಹೆಚ್ಚಳ. ಒಮ್ಮೊಮ್ಮೆ ಗೀರು ರಚನೆಯನ್ನು ಕಾಣಬಹುದು. ಅದರಲ್ಲೂ ರೂಪಾಂತರ ಕ್ರಿಯೆಗೊಳಗಾದ ಶಿಲೆಗಳಲ್ಲಿ ಈ ವಿನ್ಯಾಸವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ.
ಶಿಲಾ ಶ್ರೇಣಿಯ ಮುಖ್ಯ ವರ್ಗಗಳು ಹೀಗಿವೆ :

ಅಧಿಕಸಿಲಿಕಾಂಶ ಚಾರ್ನಕೈಟ್ : ಇದನ್ನೇ ಹಾಲೆಂಡ್ ಚಾರ್ನಕೈಟ್ ಎಂದು ಹೆಸರಿಸಿದ್ದು. ಇದೊಂದು ಸಮಕಣ ವಿನ್ಯಾಸವನ್ನು ತಳೆದಿರುವ ಹೈಪರ್‍ಸ್ತೀನ್ ಗ್ರ್ಯಾನೈಟ್. ಶಿಲೆಯ ಸಂಯೋಜನೆಯಲ್ಲಿ ನೀಲಿ ಛಾಯೆಯ ಕ್ವಾಟ್ರ್ಸ್ ಮತ್ತು ಫೆಲ್ಡ್‍ಸ್ಟಾರುಗಳು ಅಧಿಕ ಹಾಗೂ ಪ್ರಮುಖ. ವರ್ಣ ಖನಿಜಗಳಲ್ಲಿ ಹೈಪರ್ ಸ್ತೀನ್ ಬಹು ಪ್ರಧಾನವಾದುದು. ಒಮ್ಮೊಮ್ಮೆ ಬಯೊಟೈಟ್, ಹಾರ್ನ್‍ಬ್ಲೆಂಡ್ ಮುಂತಾದವೂ ಇರಬಹುದು. ಗಾರ್ನೆಟ್, ಜಿರ್‍ಕಾನ್, ಅಪಟೈಟ್, ರೂಟೈಲ್, ಕಬ್ಬಿಣದ ಅದುರು-ಇವು ಅಲ್ಪ ಪರಿಮಾಣಗಳಲ್ಲಿರುವುದುಂಟು. ಇವು ಸಾಮಾನ್ಯವಾಗಿ ಬೃಹದಾಕಾರದ ಬೆಟ್ಟಗಳೋಪಾದಿಯಲ್ಲಿರುತ್ತವೆ. ಉದಾಹರಣೆಗೆ ನೀಲಗಿರಿ ಬೆಟ್ಟ ; ಬಿಳಿಗಿರಿರಂಗನ ಬೆಟ್ಟ ಇತ್ಯಾದಿ.

ಮಧ್ಯವರ್ತಿ ಚಾರ್ನಕೈಟ್ : ಇವು ಸಹ ಸಮಕಣರಚನೆಯನ್ನು ತಳೆದಿರುತ್ತವೆ. ಇವುಗಳ ಸಂಯೋಜನೆಯಲ್ಲಿ ಬೂದುಬಣ್ಣದ ಕ್ವಾಟ್ರ್ಸ್, ಫೆಲ್ಡ್‍ಸ್ಪಾರುಗಳು, ಆಗೈಟ್, ಹಾರ್ನ್‍ಬ್ಲೆಂಡ್, ಹೈಪರ್ ಸ್ತೀನ್-ಇವೇ ಪ್ರಮುಖಘಟಕಗಳು. ವರ್ಣ ಹಾಗೂ ನಿರ್ವರ್ಣ ಖನಿಜಗಳು ಸಮಪರಿಮಾಣಗಳಲ್ಲಿವೆ. ಇವು ಸಹ ಸಣ್ಣಪುಟ್ಟ ಗುಡ್ಡಬೆಟ್ಟಗಳು ಹಾಗೂ ಡೈಕುಗಳಂತಿವೆ. ಉದಾಹರಣೆಗೆ ಸೇಲಮ್ ಬಳಿಯ ಷೆವರಾಯ್ ಬೆಟ್ಟ.

ಅಲ್ಪಸಿಲಿಕಾಂಶ ಚಾರ್ನಕೈಟ್ : ಇವುಗಳಲ್ಲೂ ಕಣವಿನ್ಯಾಸವನ್ನೇ ಕಾಣಬಹುದು. ಸಂಯೋಜನೆಯಲ್ಲಿ ಫೆಲ್ಡ್‍ಸ್ಪಾರ್, ಆಗೈಟ್, ಹಾರ್ನ್ ಬ್ಲೆಂಡ್ ಮತ್ತು ಹೈಪರ್ ಸ್ತೀನುಗಳು ಪ್ರಮುಖ ಖನಿಜಗಳಾಗಿದ್ದು ವರ್ಣ ಖನಿಜಗಳ ಪರಿಮಾಣವೇ ಅಧಿಕ. ಗಾರ್ನೆಟ್ ಸಹ ಕಂಡುಬರುವುದುಂಟು. ಇವು ಸಾಮಾನ್ಯವಾಗಿ ಡೈಕುಗಳಂತಿವೆ. ಮೈಸೂರಿನ ಬಳಿಯ ಕಡಕೊಳ ಮತ್ತು ಕುಶಾಲನಗರದ ಸುತ್ತಮುತ್ತ ಇವನ್ನು ಕಾಣಬಹುದು.

ಅತ್ಯಲ್ಪ ಸಿಲಿಕಾಂಶ ಚಾರ್ನಕೈಟ್ : ಇಲ್ಲೂ ಕಣವಿನ್ಯಾಸವೇ ಪ್ರಧಾನ. ಶಿಲೆ ಬಹು ಮಟ್ಟಿಗೆ ಹೈಪರ್‍ಸ್ತೀನಿನಿಂದ ಕೂಡಿದ್ದು ಅದರೊಟ್ಟಿಗೆ ಹಾರ್ನ್‍ಬ್ಲೆಂಡ್ ಮತ್ತು ಆಗೈಟ್ ಇರುವುದುಂಟು. ಆಲಿವೀನ್, ಸ್ಪಿನೆಲ್ ಅಪಟೈಟ್ ಮುಂತಾದ ಖನಿಜಗಳು ಇದ್ದರೂ ಗೌಣ. ಇವು ಸಹ ಸಣ್ಣಪುಟ್ಟ ಡೈಕುಗಳೋಪಾದಿಯಲ್ಲಿ ಹಲವಾರು ಕಡೆ ಕಂಡುಬಂದಿವೆ.
ಚಾರ್ನಕೈಟ್ ಶಿಲೆಯ ತೆಳುಪದರುಗಳನ್ನು ಸೂಕ್ಷ್ಮದರ್ಶಿಯ ಮೂಲಕ ಪರೀಕ್ಷಿಸಿದಾಗ ಶಿಲೆಯ ವಿನ್ಯಾಸ ಹಾಗೂ ಖನಿಜಗಳ ಲಕ್ಷಣಗಳು ಬಹು ಉತ್ತಮರೀತಿಯಲ್ಲಿ ವ್ಯಕ್ತವಾಗುತ್ತವೆ. ಕ್ವಾಟ್ರ್ಸ್ ಕಣಗಳಲ್ಲಿ ಕೂದಲಿನಂತೆ ಬಹು ಸೂಕ್ಷ್ಮವಾಗಿರುವ ರೂಟೈಲಿನ ಎಳೆಗಳು ನಿರ್ದಿಷ್ಟ ದಿಕ್ಕುಗಳಲ್ಲಿ ಅಡಕವಾಗಿರುವುದನ್ನು ಕಾಣಬಹುದು. ಖನಿಜ ಹಾಗೂ ಶಿಲೆಯ ವಿಶಿಷ್ಟ ನೀಲಿ ಛಾಯೆಗೆ ಈ ರಚನೆಯೇ ಮೂಲವೆಂದೂ ಕೆಲವರ ಅಭಿಪ್ರಾಯ. ಫೆಲ್ಡ್‍ಸ್ಪಾರ್ ಖನಿಜದ ಮೈಕ್ರೊಕ್ಲೀನ್, ಆರ್ಥೊಕ್ಲೇಸ್ ಮತ್ತು ಪ್ಲೇಜಿಯೊಕ್ಲೇಸ್ ಎಂಬ ಮೂರು ಪ್ರಭೇದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಕೆಲವು ಖನಿಜ ಕಣಗಳು ಪರ್ಥಿಟಿಕ್ ಮತ್ತು ಪ್ರತಿಪರ್ಥಿಟಿಕ್ ಎಂಬ ಸೂಕ್ಷ್ಮ ಹೆಣಿಗೆ ವಿನ್ಯಾಸಗಳನ್ನು ತಳೆದಿರುವುದೂ ಉಂಟು. ವರ್ಣಖನಿಜಗಳಲ್ಲಿ ಪ್ರಧಾನವಾದುದೇ ಹೈಪರ್‍ಸ್ತೀನ್, ಇದು ವಿಶಿಷ್ಟ ಪಾಟಲ ಅಥವಾ ಕಂದುಬಣ್ಣವನ್ನು ತಳೆದಿದ್ದು ಅಸಂಖ್ಯಾತ ಸೂಕ್ಷ್ಮ ಕಣಗಳಿಂದ ಕೂಡಿರುತ್ತದೆ. ಧ್ರುವೀಕೃತ ಬೆಳಕಿನಲ್ಲಿ ನಯನಮನೋಹರವಾದ ವರ್ಣಪರಿವರ್ತನೆಯನ್ನೂ ವೀಕ್ಷಿಸಬಹುದು. ಮತ್ತೊಂದು ವರ್ಣಖನಿಜವಾದ ಡಯಾಪ್ಸೈಡ್ ಬಹುಚೆಲುವಾದ ತಿಳಿಹಸಿರು ಬಣ್ಣವನ್ನೂ ಹಾರ್ನ್‍ಬ್ಲೆಂಡ್ ಕಡುಹಸಿರುಮಿಶ್ರಿತ ಕಂದುಬಣ್ಣವನ್ನೂ ಸೂಸುತ್ತವೆ. ಹಾರ್ನ್‍ಬ್ಲೆಂಡಿನ ವರ್ಣವರ್ತನೆಯೂ ವಿಶಿಷ್ಟ. ಅಲ್ಲದೆ ಹಲವು ಪ್ರಭೇದಗಳಲ್ಲಿರುವ ಪಾಟಲವರ್ಣದ ಗಾರ್ನೆಟ್, ಆಲಿವೀನ್, ಅಪಟೈಟ್, ಜಿರ್‍ಕಾನ್ ಮುಂತಾದ ಗೌಣ ಖನಿಜಗಳು ಬಹುಸ್ಪಷ್ಟವಾಗಿ ಗೋಚರವಾಗುತ್ತವೆ.

ಮೊತ್ತಮೊದಲಿಗೆ ಈ ಶಿಲೆ ದೊರೆತ ತಮಿಳುನಾಡಿನ ಇಡೀ ನೀಲಗಿರಿಬೆಟ್ಟ ಶ್ರೇಣಿ ಸುಮಾರು 700 ಚ.ಮೈ. ವಿಸ್ತೀರ್ಣವಾಗಿದ್ದು ಬಹುತೇಕ ಈ ಶಿಲೆಗಳಿಂದಾದುದು. ಅಲ್ಲದೆ ಮದರಾಸಿನ ಪಲ್ಲವರಮ್, ಸೇಂಟ್ ಥಾಮಸ್ ಮೌಂಟ್ ಮತ್ತು ಮಹಾಬಲಿಪುರಮ್, ಸೇಲಮ್ ಬಳಿಯ ಷೆವರಾಯ್, ಪಳನಿ, ತಿನ್ನವೆಲ್ಲಿ ಈ ಪ್ರದೇಶಗಳೆಲ್ಲವೂ ಚಾರ್ನಕೈಟ್‍ಮಯ. ಕರ್ನಾಟಕದ ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಶಿವಸಮುದ್ರದ ಸುತ್ತಲಿನ ಬೆಟ್ಟಗಳು, ಕನಕಪುರ ಸಾತನೂರು-ಹಲಗೂರು ಪ್ರಾಂತದ ಕಬ್ಬಾಳದುರ್ಗ ಮುಂತಾದ ಬೆಟ್ಟಗಳು, ಕೊಡಗಿನ ಕುಶಾಲನಗರದ ಸುತ್ತಮುತ್ತ ಚಾರ್ನಕೈಟ್ ಶಿಲಾಶ್ರೇಣಿಗೆ ಸೇರಿದ ವಿವಿಧ ಬಗೆಯ ಶಿಲೆಗಳು ಹರಡಿವೆ. ಆಂಧ್ರಪ್ರದೇಶದ ವಿಜಯವಾಡ-ಗುಂಟೂರು, ಮಧ್ಯಪ್ರದೇಶದ ಬಸ್ತರ್ ಹಾಗೂ ಬಿಹಾರದ ಹಲವೆಡೆಗಳಲ್ಲಿ ಚಾರ್ನಕೈಟುಗಳನ್ನು ಗುರುತಿಸಿದ್ದಾರೆ. ಒಟ್ಟಿನಲ್ಲಿ ಇವು ಬಹುಮಟ್ಟಿಗೆ ಭಾರತದ ದಕ್ಷಿಣಪ್ರದೇಶಗಳಿಗೆ ಸೀಮಿತವಾದ ಶಿಲಾವರ್ಗ. ಇದಲ್ಲದೆ ಶ್ರೀಲಂಕ, ಆಫ್ರಿಕದ ಅಂಗೋಲ, ಕಾಂಗೋ, ಕೀನ್ಯ. ನೈಜೀರಿಯ ಮತ್ತು ಉಗಾಂಡ, ಆಸ್ಟ್ರೇಲಿಯ, ಆರ್ಕ್‍ಟಿಕ್ ಮತ್ತು ಅಂಟಾರ್ಕ್‍ಟಿಕ್ ಮೇರುಪ್ರದೇಶಗಳು, ಕೆನಡ, ಚೀನ, ಗ್ರೀನ್‍ಲೆಂಡ್, ದಕ್ಷಿಣ ಅಮೆರಿಕ, ಅಮೆರಿಕದ ಸಂಯುಕ್ತಸಂಸ್ಥಾನಗಳು, ಯೂರೋಪಿನ ಫಿನ್ಲೆಂಡ್, ನಾರ್ವೇ ಮತ್ತು ಸ್ಕಾಟ್ಲೆಂಡ್, ರಷ್ಯದ ಸೈಬೀರಿಯ, ಯುಕ್ರೇನ್ ಮತ್ತು ಕೋಲಾ ಪರ್ಯಾಯ ದ್ವೀಪ-ಹೀಗೆ ಪ್ರಪಂಚದ ನಾನಾ ಭಾಗಗಳಲ್ಲಿ ಚಾರ್ನಕೈಟುಗಳನ್ನು ಗುರುತಿಸಿ ವಿವರಿಸಲಾಗಿದೆ.

ಮೊತ್ತಮೊದಲಿಗೆ ತಮಿಳುನಾಡಿನ ಚಾರ್ನಕೈಟುಗಳನ್ನು ಅಧ್ಯಯನ ಮಾಡಿದ ಹಾಲೆಂಡ್ ಇದನ್ನು ಕುರಿತ ಹಲವು ವಿವರಗಳನ್ನು ಒದಗಿಸಿದ್ದಾನೆ. ಶಿಲೆಯ ಬೆಟ್ಟಗಳು ನಕ್ಷೆಯಲ್ಲಿ ನಿರ್ದಿಷ್ಟ ನೀಳಾಕಾರವನ್ನು ತೋರುತ್ತವೆ. ಬಂಡೆಗಳನ್ನು ಪರೀಕ್ಷಿಸಿದಾಗ ನಡುವೆ ಅಲ್ಲಲ್ಲೆ ನಾನಾಗಾತ್ರದ ಹಾಗೂ ಆಕಾರದ ಕಪ್ಪುಮಚ್ಚೆಗಳನ್ನು ಗುರುತಿಸಬಹುದು. ಇವು ಸಹ ಅನೇಕ ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ವ್ಯಾಪಿಸಿರುವುದನ್ನು ಕಾಣಬಹುದು. ಈ ಮಚ್ಚೆಗಳಲ್ಲಿ ಶಿಲೆಯ ವರ್ಣ ಖನಿಜಗಳು ಸಂಗ್ರಹವಾಗಿರುತ್ತವೆ. ಚಾರ್ನಕೈಟುಗಳು ಗೀರು ವಿನ್ಯಾಸವನ್ನೂ ತೋರಿಸುವುದುಂಟು. ನೀಳಾಕೃತಿಯ ಖನಿಜಗಳು ಯಾವುದಾದರೊಂದು ನಿರ್ದಿಷ್ಟ ದಿಕ್ಕಿನಲ್ಲಿ ಹರಡಿರುತ್ತವೆ. ಬಿಸಿಲು ಮಳೆಗಾಳಿಗಳ ಹಾವಳಿಗೊಳಗಾಗಿ ಮಾಸಲಾಗಿರುವ ಶಿಲೆಯಲ್ಲಿ ಈ ರಚನೆ ಸುಸ್ಪಷ್ಟ. ತಮಿಳುನಾಡಿನ ಹಲವಾರು ಕಡೆ ಇವು ತಮಗಿಂತ ಹಳೆಯದಾದ ನೈಸ್(ಗೀರು)ಶಿಲೆಗಳನ್ನು ಭೇದಿಸಿ ಒಳಹೊಕ್ಕಿರುವ ವಿಚಾರವನ್ನು ಹಾಲೆಂಡ್ ಪ್ರಸ್ತಾವಿಸಿದ್ದಾನೆ. ಕೆಲವು ಕಡೆ ಒಂದು ರೀತಿಯ ತುಯ್ತಕ್ಕೊಳಗಾಗಿ ನುಚ್ಚುನುರಿಯಾದ ವಿನ್ಯಾಸವೂ ಕಂಡುಬರುವುದುಂಟು. ಈ ಲಕ್ಷಣಗಳನ್ನು ಆಧರಿಸಿ ಚಾರ್ನಕೈಟು ಅಗ್ನಿಶಿಲೆ-ಅಂದರೆ ಮಾತೃಶಿಲಾ ದ್ರವದ ಆರುವಿಕೆಯಿಂದ ಉಂಟಾದ ಮೂಲಶಿಲೆ-ಎಂಬ ಅಭಿಪ್ರಾಯವನ್ನು ಹಾಲೆಂಡ್ ಸೂಚಿಸಿದ. ಆತನ ಅನೇಕ ಸಹೋದ್ಯೋಗಿಗಳೂ ತಮ್ಮ ಅಧ್ಯಯನಗಳಿಂದ ಹೆಚ್ಚಿನ ಮಾಹಿತಿಗಳನ್ನು ಒದಗಿಸಿ ಈ ಅಭಿಪ್ರಾಯವನ್ನು ಪುಷ್ಟೀಕರಿಸಿದರು. ಆದರೆ ವ್ರಿಡೆನ್‍ಬರ್ಗ್ ಮಾತ್ರ ಇದನ್ನು ವಿರೋಧಿಸಿ ಚಾರ್ನಕೈಟ್ ಅಗ್ನಿಶಿಲೆಯಾಗಿರದೆ ರೂಪಾಂತಶಿಲೆಯಾಗಿರಲು ಸಾಧ್ಯವೆಂಬ ಅಭಿಪ್ರಾಯವನ್ನು ಸೂಚಿಸಿದ್ದಾನೆ.

ಮೈಸೂರು ಭೂಶೋಧನ ಇಲಾಖೆಯ ಬಿ. ಜಯರಾಮ್ ಮೊತ್ತಮೊದಲಿಗೆ 1901ರಲ್ಲಿ ಈ ವರ್ಗದ ಶಿಲೆಗಳನ್ನು ಬೆಂಗಳೂರು ಜಿಲ್ಲೆಯ ಸಾತನೂರು ಬಳಿ ಪತ್ತೆ ಹಚ್ಚಿದರು. ಆದಾಗ್ಯೂ ಚಾರ್ನಕೈಟ್ ಎಂಬ ಹೆಸರನ್ನು ಮೊದಲು ಬಳಸಿದಾತ ಇಲಾಖೆಯ ನಿರ್ದೇಶಕ ಡಬ್ಲ್ಯು.ಎಫ್.ಸ್ಮೀತ್, 1904ರಲ್ಲಿ. ಈತ ಬಿಳಿಗಿರಿರಂಗನ ಬೆಟ್ಟದ ಶಿಲೆಗಳ ವೀಕ್ಷಣ ಕಾರ್ಯ ನಡೆಸಿ ಅವುಗಳಿಗೂ ನೀಲಗಿರಿ ಬೆಟ್ಟದ ಶಿಲೆಗಳಿಗೂ ಇರುವ ಹೋಲಿಕೆಯನ್ನು ಪ್ರಸ್ತಾವಿಸಿದ್ದಾನೆ. 1906-1907ರಲ್ಲಿ ಎಚ್.ಕೆ. ಸ್ಲೇಟರ್ ಮಳವಳ್ಳಿ-ಕನಕಪುರ ಸುತ್ತಮುತ್ತ ಸುಮಾರು 300 ಚ.ಮೈ. ವಿಸ್ತೀರ್ಣದ ಪ್ರಾಂತದಲ್ಲಿ ಚಾರ್ನಕೈಟುಗಳನ್ನು ಗುರುತಿಸಿ ವಿವರಿಸಿದ. ಇಲ್ಲೆಲ್ಲ ಅಧಿಕಸಿಲಿಕಾಂಶ ಚಾರ್ನಕೈಟೇ ಪ್ರಧಾನವಾಗಿ ಕಂಡುಬರುತ್ತದೆ. ಈತನ ಟಿಪ್ಪಣಿಗಳಲ್ಲಿ ಗ್ರ್ಯಾನೈಟ್ ಶಿಲೆ ಚಾರ್ನಕೈಟ್ ಶಿಲೆಗಳನ್ನು ಭೇದಿಸಿ ತೂರಿಬಂದ ವಿವರಗಳೂ ಇವೆ. ಬಿ. ಜಯರಾಮ್ ಅವರು ರಾಜ್ಯದ ದಕ್ಷಿಣ ಪ್ರದೇಶಗಳಲ್ಲಿ ಭೂಶೋಧನಕಾರ್ಯವನ್ನು ಮುಂದುವರಿಸಿ ಚಾರ್ನಕೈಟ್ ಶ್ರೇಣಿಯ ವಿವಿಧ ಬಗೆಗಳನ್ನೆಲ್ಲ ಪತ್ತೆಹಚ್ಚಿ ಇವೆಲ್ಲವೂ ಮ್ಯಾಗ್ಮೀಯ ಶಿಲೆಗಳೆಂದೂ ಜನ್ಯಸಂಬಂಧವನ್ನು ತೋರಿ ಒಂದೇ ಮೂಲವನ್ನು ಸೂಚಿಸುತ್ತವೆಂದೂ ಅಭಿಪ್ರಾಯಪಟ್ಟರು ಅಲ್ಲದೆ ಮಿಥ್ಯಾಚಾರ್ನಕೈಟ್ ಎಂಬ ವಿಶೇಷ ಶಿಲೆಯನ್ನು ಗುರುತಿಸಿ ಅದು ತನ್ನ ಎಲ್ಲ ಲಕ್ಷಣಗಳಲ್ಲೂ ಚಾರ್ನಕೈಟನ್ನೇ ಹೋಲಿದರೂ ಅದರಲ್ಲಿ ಹೈಪರ್‍ಸ್ತೀನ್ ಕಾಣಬರದ ಅಂಶವನ್ನು ಪ್ರಸ್ತಾವಿಸಿದ್ದಾರೆ. ಪಿ. ಸಂಪತ್ ಅಯ್ಯಂಗಾರ್‍ಅವರು ಹಾಸನ-ಕೊಡಗು ಸರಹದ್ದಿನ ಸಕಲೇಶಪುರ, ಮಂಜರಾಬಾದ್, ಅರಕಲಗೂಡು ಪ್ರದೇಶದಲ್ಲಿ ಚಾರ್ನಕೈಟ್ ಡೈಕುಗಳನ್ನು ಗುರುತಿಸಿದರು. ಇವು ಬಹುಮಟ್ಟಿಗೆ ಅಲ್ಪ ಸಿಲಿಕಾಂಶ ಚಾರ್ನಕೈಟುಗಳು. ಇದರೂ ಚಾರ್ನಕೈಟುಗಳು ಮಾತೃಶಿಲಾದ್ರವವೊಂದರ ಮ್ಯಾಗ್ಮ ಆರುವಿಕೆಯಿಂದುಂಟಾದ ಅಗ್ನಿಶಿಲೆಗಳೆಂಬ ಹಾಲೆಂಡ್‍ವಾದವನ್ನೇ ಸಮರ್ಥಿಸಿದರು. ಮುಂದೆ ಬಿ. ರಾಮರಾಯರು ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ-ಬಿಳಿಗಿರಿರಂಗನ ಬೆಟ್ಟ, ಶಿವಸಮುದ್ರ, ನಂಜನಗೂಡು-ಭೂಶೋಧನೆ ನಡೆಸಿ ಈ ಶಿಲೆಯ ಬಗ್ಗೆ ಹೆಚ್ಚು ಮಾಹಿತಿಗಳನ್ನು ಸಂಗ್ರಹಿಸಿದುದೇ ಅಲ್ಲದೆ ಅನೇಕ ಹೊಸ ವಿಷಯಗಳನ್ನೂ ಬೆಳಕಿಗೆ ತಂದರು. ಅನೇಕ ಕಡೆ ಅಧಿಕಸಿಲಿಕಾಂಶ ಚಾರ್ನಕೈಟುಗಳಿಗೂ ನೈಸುಗಳಿಗೂ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿಲ್ಲ. ಒಂದು ಮತ್ತೊಂದರಲ್ಲಿ ಕ್ರಮೇಣ ಮಿಲನ ಹೊಂದುವ ಅಂಶವೂ ಹೊರಪಟ್ಟಿತು. ಹಲವೆಡೆ ಎರಡು ಭಿನ್ನ ಶಿಲೆಗಳ ಮಿಶ್ರಣದಿಂದ ಚಾರ್ನಕೈಟ್ ತಲೆದೋರಿರುವ ಅಂಶವೂ ವ್ಯಕ್ತವಾಯಿತು. ಹಾಗೂ ಇವಕ್ಕಿಂತ ಕಿರಿಯವೆನಿಸಿದ ಕ್ಲೋಸ್ಪೇಟೆ (ರಾಮನಗರ) ಗ್ರ್ಯಾನೈಟುಗಳು ಈ ಶಿಲೆಗಳ ಜನನದಲ್ಲಿ ಬಹು ಪ್ರಮುಖ ಪಾತ್ರವನ್ನು ವಹಿಸಿವೆ ಎಂದೂ ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ ಚಾರ್ನಕೈಟುಗಳ ಜನನ ಏಕರೀತಿಯಾಗಿರದೆ ವಿವಿಧ ಪ್ರದೇಶದ ವಿವಿಧ ಚಾರ್ನಕೈಟುಗಳು ವಿವಿಧ ರೀತಿಯಲ್ಲಿ ರೂಪುತಳೆದಿರುವ ಹೊಸ ಅಂಶವನ್ನು ಪ್ರಚುರಪಡಿಸಿದರು. ಅದುವರೆಗೂ ಪ್ರಚಲಿತವಾಗಿದ್ದ ಹಾಲೆಂಡ್‍ವಾದವನ್ನು ಸಂಪೂರ್ಣವಾಗಿ ಅನುಮೋದಿಸಲಿಲ್ಲ. ಇವು ಖಂಡಿತವಾಗಿಯೂ ಒಂದೇ ಶಿಲಾಬುಡಕಟ್ಟಿಗೆ ಸೇರಿದ ಪ್ರಭೇದಗಳಲ್ಲವೆಂದೂ ಇವುಗಳಲ್ಲಿ ಪರಸ್ಪರ ಜನ್ಯಸಂಬಂಧವನ್ನು ಸೂಚಿಸುವ ಯಾವ ಲಕ್ಷಣವನ್ನು ಗುರುತಿಸಲಾಗದೆಂದೂ ಹೇಳಿದರು. ಚಾರ್ನಕೈಟ್ ಶಿಲಾಸಮುದಾಯದಲ್ಲಿ ಹಲವಾರು ಬಗೆಗಳು ನಾಡಶಿಲೆಗಳ ರೂಪಾಂತರಿಂದ ಉಂಟಾಗಿರುವ ಸಾಧ್ಯತೆಯನ್ನು ಸೂಚಿಸಿದ ಕೀರ್ತಿ ಬೆಳ್ಳೂರು ರಾಮರಾಯರ ಪಾಲಿನದು. ಇದೇ ವೇಳೆಗೆ ಪ್ರಪಂಚದ ನಾನಾ ಪ್ರದೇಶಗಳಲ್ಲಿ ಚಾರ್ನಕೈಟುಗಳ ಸಂಶೋಧನೆಗಳು ನಡೆದಿದ್ದು ಇದೇ ಬಗೆಯ ಅಭಿಪ್ರಾಯಗಳನ್ನು ಹಲವಾರು ತಜ್ಞರೂ ವ್ಯಕ್ತಪಡಿಸಿದರೆಂಬ ಅಂಶ ಬಹುಮುಖ್ಯ. ಸಿ. ಎಸ್. ಪಿಚ್ಚಮುತ್ತು ಅವರು ತಮ್ಮ ಅಧ್ಯಯನಗಳಿಂದ ಈ ಶಿಲೆ ರೂಪುಗೊಳ್ಳುವ ಕಾರ್ಯದಲ್ಲಿ ಕ್ಲೋಸ್ಪೇಟೆ ಗ್ರ್ಯಾನೈಟಿನ ಪಾತ್ರವೇನೂ ಇಲ್ಲವೆಂಬ ಹೊಸ ಅಂಶವನ್ನು ನಿರೂಪಿಸಿದುದೇ ಅಲ್ಲದೆ ನೈಸ್‍ಶಿಲೆಗಳು ಚಾರ್ನಕೈಟೀಕರಣವೆಂಬ ವಿಶೇಷ ರೀತಿಯ ಕ್ರಿಯೆಗೊಳಗಾಗುವುದರ ಮೂಲಕ ಇವು ಉಂಟಾದುವೆಂಬ ಹೊಸ ವಾದವನ್ನು ಮುಂದಿಟ್ಟರು. ಇತ್ತೀಚಿನ ವರ್ಷಗಳಲ್ಲಿ ಎಂ.ಎಸ್. ಸದಾಶಿವಯ್ಯನವರು ಮಳವಳ್ಳಿ, ಸಾತನೂರು, ಹಲಸೂರು, ಶಿವನಸಮುದ್ರ ಈ ಪ್ರದೇಶದ ಚಾರ್ನಕೈಟುಗಳನ್ನು ವಿವರವಾಗಿ ಸಂಶೋಧಿಸಿ ಇವು ನೈಸ್ ಶಿಲೆಗಳಿಗಿಂತ ವಯಸ್ಸಿನಲ್ಲಿ ಹಿರಿಯವೆಂದೂ ಈ ಕಾರಣ ಚಾರ್ನಕೈಟೀಕರಣಕ್ರಿಯೆ ಅಸಮಂಜಸವೆಂದೂ ಅಭಿಪ್ರಾಯ ಪಟ್ಟಿದ್ದಾರೆ. ಇಂದಿಗೂ ಈ ಶಿಲೆಗಳನ್ನು ಕುರಿತ ಸಂಶೋಧನೆಗಳು ಪ್ರಪಂಚದ ಹಲವಾರುಕಡೆ ನಡೆಯುತ್ತಿದ್ದು ಮುಂದೆ ಹೊಸ ಅಂಶಗಳು ವ್ಯಕ್ತವಾಗುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಚಾರ್ನಕೈಟನ್ನು ಕುರಿತ ಕೊನೆಯ ಮಾತು ಸಲ್ಲ. ಮೊತ್ತಮೊದಲು ಮದರಾಸಿನ ಸಣ್ಣಗುಡ್ಡವೊಂದರಲ್ಲಿ ಕಾಣಿಸಿಕೊಂಡ ಈ ಶಿಲೆ ಪ್ರಪಂಚವ್ಯಾಪ್ತಿಯಾಗಿ ಇಂದಿಗೂ ಪ್ರಸಿದ್ಧ ಭೂವಿಜ್ಞಾನಿಗಳ ಗಮನವನ್ನು ಸೆಳೆದಿರುವುದು ಅತ್ಯಂತ ವಿಸ್ಮಯಕರ. ಶಿಲಾವಿಜ್ಞಾನದ ಅಧ್ಯಯನದಲ್ಲಿ ಇದೊಂದು ರೋಮಾಂಚಕಾರಿ ಅಧ್ಯಾಯ.
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ